ಟ್ಯೂನೀಷಿಯ
ಉತ್ತರ ಆಫ್ರಿಕದ ಒಂದು ಗಣರಾಜ್ಯ. ಪೊ.ರೇ. 70 33'-110 38' ಮತ್ತು ಉ.ಅ. 29054'-7021' ಮಧ್ಯೆ ಇದೆ. ಉತ್ತರ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ. ಪಶ್ಚಿಮ ಮತ್ತು ನೈಋತ್ಯದಲ್ಲಿ ಆಲ್ಜೀರಿಯ, ಆಗ್ನೇಯದಲ್ಲಿ ಲಿಬ್ಯ ಇದರ ಮೇರೆಗಳು. ಜಾಲಿಟಾ, ಕರ್ಕೇನ ಮತ್ತು ಜರ್ಬ ದ್ವೀಪಗಳೂ ಇದಕ್ಕೆ ಸೇರಿವೆ. ಉತ್ತರ ಮತ್ತು ಪೂರ್ವದ ಕಡಲ ತೀರದ ಒಟ್ಟು ಉದ್ದ ಸು. 810 ಮೈ. (2,304 ಕಿಮೀ.) ವಿಸ್ತೀರ್ಣ 63,378 ಚ.ಮೈ. ಜನಸಂಖ್ಯೆ 52,38,000 (1972).ರಾಜಧಾನಿ ಟ್ಯೂನಿಸ್ (7,89,787) (1966).
(ವಿ.ಜಿ.ಕೆ.)

ಭೂವಿಜ್ಞಾನ : ಟ್ಯೂನೀಷಿಯದ ರೂಪರೇಖೆ ಕ್ರಿಟೇಷಸ್ ಯುಗದ ವೇಳೆಗೆ ಮೂಡಿ ಬಂದಿರಬೇಕು. ಆಗ ಸಿನೋಮೇನಿಯನ್ ಸಮುದ್ರ ಈ ಪ್ರದೇಶವನ್ನು ಆವರಿಸಿತ್ತು. ಉತ್ತರದ ಅಟ್ಲಾಸ್ ಪರ್ವತಶ್ರೇಣಿ ಉದ್ಭವಿಸಿದ್ದು ಟರ್ಷಿಯರಿ ಯುಗದಲ್ಲಿ. ಅಲ್ಲಲ್ಲಿ ಭೂಕುಸಿತದಿಂದ ಉಂಟಾದ ತಗ್ಗುಗಳಲ್ಲಿ ಸುಣ್ಣಶೀಲೆ ರೂಪುಗೊಂಡಿದೆ. ಉಳಿದೆಡೆಗಳಲ್ಲಿ ಕಾರ್ಬಾನಿಫೆರಸ್ ಯುಗದ ಸಸ್ಯಾವಶೇಷಗಳನ್ನೊಳಗೊಂಡ ಶಿಲಾಪ್ರಸ್ತರಗಳಲ್ಲಿ ಹೇರಳವಾಗಿವೆ. ಅನೇಕ ಕಡೆ ಶಿಲಾಪದರಗಳು ಮಡಿಸಿಕೊಂಡಿವೆ. ಕೆಲವು ಕಡೆ ವೃತ್ತಾಕಾರದ ಮತ್ತು ಅಂಡಾಕಾರದ ಉಬ್ಬುಗಳು (ಡೋಮ್) ಕಾಣಬರುತ್ತವೆ. ಇವು ಬಹುಪಾಲು ಮಯೋಸೀನ್ ಕಾಲದವು. ಪಶ್ಚಿಮದ ಟ್ಯೂನೀಷಿಯನ್ ಸಹಾರ ಮರಳುಭೂಮಿಯಲ್ಲಿ ಮರಳು ಶಿಲೆಯ ಅಟ್ಟಳಿಗಳು (ಟೆರೇಸ್) ಹೇರಳವಾಗಿವೆ. ಸೀಸ, ಸತು, ಕಬ್ಬಿಣ, ಫಾಸ್ಫೇಟ್ ಅದರುಗುಳು ಇಲ್ಲಿ ಹೆಚ್ಚಿನ ಪರಿಮಾಣದಲ್ಲಿ ಸಿಗುತ್ತವೆ.
(ಬಿ.ಎಸ್.ಎನ್.ಎಸ್.)

	ಭೌತಲಕ್ಷಣ : ಟ್ಯೂನೀಷಿಯದ ಬಹುಭಾಗ ಸಮುದ್ರ ಮಟ್ಟದಿಂದ ಸು. 1,000' ಎತ್ತರದಲ್ಲಿದೆ. ಕೆಲವು ಕಡೆಗಳಲ್ಲಿ 4,000' ಎತ್ತರವಾಗಿರುವುದುಂಟು. ಎತ್ತರದ ನಾಡು ಪೂರ್ವದ ಕಡೆಗೆ ಇಳಿಜಾರಾಗುತ್ತ ಹೋಗುತ್ತದೆ. ಅಟ್ಲಾಸ್ ಪರ್ವತಶ್ರೇಣಿಗಳು ಈ ದೇಶವನ್ನು ಎರಡು ಖಚಿತ ಪ್ರದೇಶಗಳಾಗಿ ವಿಂಗಡಿಸುತ್ತವೆ. ಈ ಶ್ರೇಣಿಗಳಿಗೆ ಟ್ಯೂನೀಷಿಯದಲ್ಲಿ ಡೋರ್ಸಲ್ ಪರ್ವತಗಳೆಂದು ಹೆಸರು. ಈ ಪರ್ವತಗಳ ಉತ್ತರಕ್ಕಿರುವುದು ತೇವದ ಪ್ರದೇಶ; ದಕ್ಷಿಣದ್ದು ಅರೆ ಮರುಭೂಮಿ. ಉತ್ತರದ ಪ್ರದೇಶವನ್ನು ವಾಯುವ್ಯ, ಉತ್ತರ-ಮಧ್ಯ ಮತ್ತು ಈಶಾನ್ಯ ಉಪವಿಭಾಗಗಳಾಗಿ ಮತ್ತೆ ವಿಂಗಡಿಸಬಹುದು. ದಕ್ಷಿಣ ಪ್ರದೇಶದ ಮಧ್ಯಭಾಗ ಪ್ರಸ್ಥಭೂಮಿ. ತೀರ ದಕ್ಷಿಣದ ಭಾಗ ಮರುಭೂಮಿ. ಇದು ಸಹಾರ ಮರುಭೂಮಿಯಲ್ಲಿ ಲೀನವಾಗುತ್ತದೆ. ಈ ಪ್ರದೇಶದಲ್ಲಿ ಅಲ್ಲಲ್ಲಿ ಓಯಸಿಸುಗಳೂ ಉಪ್ಪುನೀರಿನ ಸರೋವರಗಳೂ (ಷಾಟ್) ಇವೆ. ಕ್ರೌಮೆರಿಯಿಂದ ಬಿಜûರ್ಟೀವರೆಗೆ ಹಬ್ಬಿರುವ ಮಜೆರ್ಡವೂ ದಕ್ಷಿಣ ಪ್ರದೇಶದಲ್ಲಿರುವ ಟಿಬೆಸವೂ ಎರಡು ಮುಖ್ಯ ಪರ್ವತಶ್ರೇಣಿಗಳು. ಟ್ಯೂನೀಷಿಯದ ಮುಖ್ಯ ನದೀವ್ಯವಸ್ಥೆ ಮಜೆರ್ಡ ಇದು ಆಲ್ಜೀರಿಯದಲ್ಲಿ ಉಗಮಿಸುತ್ತದೆ.

	ವಾಯುಗುಣ : ಮೆಡಿಟರೇನಿಯನ್ ಸಮುದ್ರದಿಂದಲೂ ಸಹಾರ ಮರುಭೂಮಿಯಿಂದಲೂ ಟ್ಯೂನೀಷಿಯದ ವಾಯುಗುಣ ಪ್ರಭಾವಿತವಾಗಿದೆ. ಮೆಡಿಟರೇನಿಯನ್ ಸಮುದ್ರ ಉಷ್ಣತೆಯನ್ನು ತಗ್ಗಿಸುತ್ತದೆ ; ಮಳೆಯನ್ನು ತರಿಸುತ್ತದೆ. ಸಹಾರ ಮರುಭೂಮಿಯಿಂದ ಬಿಸಿಯಾದ ಒಣಗಾಳಿ ಬೀಸುತ್ತದೆ. ಜೊತೆಗೆ ಟ್ಯೂನೀಷಿಯದ ಎರಡು ವಾಯುಗುಣ ಪಟ್ಟಿಗಳಿವೆ. ಉತ್ತರದ ಮೇಲೆ ಮೆಡಿಟರೇನಿಯನ್ ಪ್ರಭಾವವಿದೆ. ದಕ್ಷಿಣದಲ್ಲಿ ಸಹಾರದ ಪ್ರಭಾವವುಂಟು. ಕರಾವಳಿ ಉದ್ದಕ್ಕೂ ಉಷ್ಣತೆ ಮಧ್ಯಸ್ಥ. ಒಳ ದಕ್ಷಿಣನಾಡಿನಲ್ಲಿ ಅಧಿಕ. ಉತ್ತರದಲ್ಲಿ ಮೇಯಿಂದ ಸೆಪ್ಟೆಂಬರ್ ವರೆಗೆ, ಬೇಸಿಗೆ ಕಾಲದಲ್ಲಿ, ವಾಯುಗುಣ ಬಿಸಿಯಾಗಿಯೂ ಶುಷ್ಕವಾಗಿಯೂ ಇರುತ್ತದೆ ; ಅಕ್ಟೋಬರಿನಿಂದ ಏಪ್ರಿಲ್ ವರೆಗೆ, ಚಳಿಗಾಲದಲ್ಲಿ ಹಿತಕರವಾಗಿರುತ್ತದೆ. ಆಗ ಪದೇಪದೇ ಮಳೆಯಾಗುತ್ತದೆ.

	ಸಸ್ಯ ಪ್ರಾಣಿ ಜೀವನ : ಟ್ಯೂನೀಷಿಯದಲ್ಲಿ ನಾನಾ ಬಗೆಯ ಮರಗಳಿವೆ ಕಾಕ್, ಓಕ್, ಪೈನ್, ಎಲಚಿ ಮತ್ತು ನೀಲಗಿರಿ ಮರಗಳ ಕಾಡುಗಳು ವಾಯುವ್ಯ ಭಾಗದಲ್ಲಿ ಅಧಿಕ. ಉತ್ತರ ಮಧ್ಯ ಭಾಗ ಹುಲ್ಲುಗಾಡು. ಈಶಾನ್ಯ ಭಾಗದಲ್ಲಿ, ಟ್ಯೂನಿಸ್‍ನಿಂದ ಕ್ಯಾಪ್ ಬಾನ್ ವರೆಗೆ ಇರುವ ಪ್ರದೇಶದಲ್ಲಿ, ಜಂಬೀರ ಫಲಕಗಳ ಗಿಡಮರಗಳುಂಟು. ದೇಶದ ಕಾಲುಭಾಗಕ್ಕಿಂತ ಹೆಚ್ಚು ಪ್ರದೇಶದಲ್ಲಿ ಎಸ್ಪಾರ್ಟೊ ಹುಲ್ಲು ಬೆಳೆಯುತ್ತದೆ. ಇದು ಸ್ಟೆಪ್ ಹುಲ್ಲುಗಾಡಿನ ಪ್ರರೂಪಿ ಸಸ್ಯ. ದಕ್ಷಿಣದಲ್ಲಿ ಓಯಸಿಸ್ ಬಳಿಯಲ್ಲಿ ಖರ್ಜೂರ ಮರಗಳುಂಟು. ಟ್ಯೂನೀಷಿಯ ತೀರದ ಮತ್ತು ಅವನ ಯೋಧರ ಮಂಕಾದರೆಂದು ಐತಿಹ್ಯವುಂಟು.

	ಟ್ಯೂನೀಷಿಯದಲ್ಲಿ ನರಿ, ಕಾಡುಹಂದಿ ಮತ್ತು ಗೆಜೆóಲ್ ಹೇರಳವಾಗಿವೆ. ಕತ್ತೆ ಕಿರುಬ ವಿರಳ. ಸಹಾರದಲ್ಲಿ ಶೃಂಗಮಂಡಲ ಹಾವುಗಳೂ ಚೇಳುಗಳೂ ಸಾಮಾನ್ಯ. ಸ್ಲೀವ್ಡ್ ಮೌಫ್ಲನ್ ಎಂಬ ಒಂದು ಬಗೆಯ ಕಾಡುಕುರಿ ಪರ್ವತಪ್ರದೇಶದಲ್ಲಿದೆ. ಆಫ್ರಿಕಾನೋ-ಬ್ರಜೀಲಿಯನ್ ಜಾತಿಯ ಮೀನುಗಳುಂಟು.

	ಜನಸಂಖ್ಯೆ, ಜನಜೀವನ : 2.2ರ ದರದಲ್ಲಿ ಅಧಿಕವಾಗುತ್ತಿದೆ. 1972ರಲ್ಲಿ ಇದು 52,38,000 ಗಿತ್ತು. ಸರಾಸರಿ ಜನಸಾಂದ್ರತೆ ಚ.ಕಿಮೀ.ಗೆ 28. ದಕ್ಷಿಣದಲ್ಲಿ ಚ.ಕಿಮೀ. ಗೆ 4ರಿಂದ ಉತ್ತರದಲ್ಲಿ ಚ.ಕಿಮೀ.ಗೆ 380ರ ವರೆಗೆ ಜನಸಾಂದ್ರತೆ ವ್ಯತ್ಯಾಸವಾಗುತ್ತದೆ. 1911-1956ರ ಅವಧಿಯಲ್ಲಿ ಜನಸಂಖ್ಯೆ ಇಮ್ಮಡಿಸಿತು. ಸೇ.16 ರಷ್ಟು ಮಂದಿ ರಾಜಧಾನಿಯಾದ ಟ್ಯೂನಿಸಿನಲ್ಲಿ ವಾಸಿಸುತ್ತಾರೆ ಇತರ ದೊಡ್ಡ ಪಟ್ಟಣಗಳ ಇವು : ಸ್ಫಾಕ್ಸ್ (1,00,000), ಸೂನ್ (90,000), ಬಜûರ್ಟ (70,000), ಕೆರ್ವಾನ್ (50,000) ಗಾಬ್‍ಸ್ (40,000), ಮಾನಸ್ಟಿರ್ (40,000) ಮತ್ತು ಮೆನ್‍ಜೆóಲ್ ಬುರ್ಗೀಬ (35,000). 

	ಟ್ಯೂನೀಷಿಯದ ಜನರೂ ಅರಬ್, ಬರ್ಬರ್ ಮತ್ತು ತುರ್ಕಿ ವಂಶದವರು. ಟ್ಯೂನೀಷಿಯನ್ ಯೆಹೊದ್ಯರೂ ಐರೋಪ್ಯರೂ ಇದ್ದಾರೆ. 1964ರಲ್ಲಿ ಜಮೀನನ್ನು ರಾಷ್ಟ್ರೀಕರಿಸಿದ ಫಲವಾಗಿ ವಿದೇಶಿಯರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ.

	ಟ್ಯೂನೀಷಿಯದ ಅಧಿಕೃತ ಭಾಷೆ ಅರಬ್ಬೀ. ಆಡಳಿತ ಮತ್ತು ವಾಣಿಜ್ಯದಲ್ಲಿ ಫ್ರೆಂಚ್ ಭಾಷೆಯೂ ಸ್ಪಲ್ಪ ಬಳಕೆಯಲ್ಲಿದೆ ಕೆಲವು ಮಂದಿ ಬರ್ಬರ್ ಭಾಷೆಯನ್ನಾಡುತ್ತಾರೆ.

	ಬಹುತೇಕ ಟ್ಯೂನೀಷಿಯನರು ಸುನ್ನಿ ಮುಸ್ಲಿಮರು. ಇಸ್ಲಾಂ ರಾಜ್ಯಧರ್ಮವಾದರೂ ಟ್ಯೂನೀಷಿಯನರು ಇತರ ಧರ್ಮಗಳ ವಿಚಾರದಲ್ಲಿ ಸಹಿಷ್ಣುಗಳು. ಯೂರೋಪಿಯನರು ರೋಮನ್ ಕ್ಯಾತೋಲಿಕರು. ಉಳಿದವರು ಗ್ರೀಕ್ ಆರ್ತೊಡಾಕ್ಸ್, ಫ್ರೆಂಚ್ ಪ್ರಾಟೆಸ್ಟಂಟ್ ಮತ್ತು ಆಂಗ್ಲಿಕನ್ ಧರ್ಮೀಯರು.

	ಸಂವಿಧಾನ ಮತ್ತು ಸರ್ಕಾರ : ಟ್ಯೂನೀಷಿಯ 1881ರಿಂದ ಫ್ರೆಂಚರ ಅಧೀನದಲ್ಲಿತ್ತು. 1955ರಲ್ಲಿ ಅದಕ್ಕೆ ಸ್ವಯಮಾಡಳಿತ ಬಂತು. 1956ರಲ್ಲಿ ಅದು ಸ್ವಾತಂತ್ರ್ಯ ಪಡೆಯಿತು. ಅಲ್ಲಿದ್ದ ರಾಜಪ್ರಭುತ್ವ 1957ರಲ್ಲಿ ರದ್ದಾಗಿ ಗಣರಾಜ್ಯ ಸ್ಥಾಪನೆಯಾಯಿತು. ಮಜ್ಲಿಸ್ ಅಲ್ ಉಮ್ಮಾದಲ್ಲಿ (ರಾಷ್ಟ್ರೀಯ ಸಭೆ) ಪ್ರಾತಿನಿಧ್ಯ ಪಡೆದಿದ್ದ ಏಕೈಕ ಪಕ್ಷವಾದ ನವ ದೆಸ್ತೂರ್ ಪಕ್ಷ 1959ರಲ್ಲಿ ಗಣರಾಜ್ಯ ಸಂವಿಧಾನವನ್ನು ರಚಿಸಿತು. ಸಂವಿಧಾನದಲ್ಲಿ ಅಧ್ಯಕ್ಷನಿಗೆ ಹೆಚ್ಚು ಅಧಿಕಾರವಿದೆ. ಆತ ಮುಸ್ಲಿಮನಾಗಿರಬೇಕು. ಅವನ ಅಧಿಕಾರವಧಿ 5 ವರ್ಷ. ಒಬ್ಬನೇ ಅವಿಚ್ಛಿನ್ನವಾಗಿ ಮೂರಕ್ಕಿಂತ ಹೆಚ್ಚು ಅವಧಿಗಳಿಗೆ ಚುನಾಯಿತನಾಗುವಂತಿಲ್ಲ. ಆಡಳಿತಾಧಿಕಾರ ಅವನ ಕೈಯಲ್ಲಿರುತ್ತದೆ. ಅವನು 12 ಸದಸ್ಯರ ಸಂಪುಟವನ್ನು ಆರಿಸುತ್ತಾನೆ. ಆತ ಸೇನೆಗಳ ಮಹಾದಂಡನಾಯಕ. ಸಿವಿಲ್ ಮತ್ತು ಮಿಲಿಟರಿ ಹುದ್ದೆಗಳಲ್ಲಿ ನೇಮಕ ಮಾಡುವವನೂ ಕಾನೂನುಗಳನ್ನು ಜಾರಿಗೆ ತರುವವನೂ ಅವನೇ. ಅವನು ಸಂವಿಧಾನದ ರಕ್ಷಕ. ನ್ಯಾಯಂಗ ಸ್ವತಂತ್ರವಾದ್ದು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಮಾನವ ಸ್ವಾತಂತ್ರ್ಯ ಎಲ್ಲರಿಗೂ ಸಮಾನ. ಮಜ್ಲಿóಸ್ ಮೂರನೆಯ ಎರಡು ಬಹುಮತದಿಂದ ಸಂವಿಧಾನವನ್ನು ಬದಲಾಯಿಸಬಹುದು. 

	ಮಜ್ಲಿಸಿನಲ್ಲಿ 90 ಸದಸ್ಯರಿರುತ್ತಾರೆ. ಇವರ ಆಯ್ಕೆ ಐದು ವರ್ಷಗಳಿಗೊಮ್ಮೆ. ನೇರ ಸಾರ್ವತ್ರಿಕ ಮತದಾನ ಮೂಲಕ. ರಾಜ್ಯ ಪರಿಷತ್ತು ಆಡಳಿತ ಮಂಡಲಿ, ವ್ಯಕ್ತಿಗಳಿಗೂ ಸಕಾರಕ್ಕೂ ಅಥವಾ ಸಾರ್ವಜನಿಕ ಸಂಸ್ಥೆಗಳಿಗೂ ನಡುವೆ ವಿವಾದಗಳನ್ನು ಪರಿಹರಿಸಲು ಅದಕ್ಕೆ ಅಧಿಕಾರವುಂಟು. ಸರ್ಕಾರದ ಲೆಕ್ಕಗಳನ್ನು ಶೋಧಿಸಿ ವರದಿ ಮಾಡಲು ಲೆಕ್ಕ ಶೋಧನ ಕಚೇರಿಯೊಂದು ಅದಕ್ಕೆ ಇದೆ. ಟ್ಯೂನೀಷಿಯವನ್ನು 13 ವಿಲಾಯತ್‍ಗಳಾಗಿ (ಗವರ್ನರಾಡಳಿತ ವಿಭಾಗ) ವಿಂಗಡಿಸಲಾಗಿದೆ. ಪ್ರತಿ ವಿಲಾಯತ್‍ಗೂ ಒಬ್ಬ (ಗವರ್ನರ್) ಇರುತ್ತಾನೆ. ಅವನಿಗೆ ನೆರವು ನೀಡಲು ಪ್ರತಿನಿಧಿಗಳಿರುತ್ತಾರೆ (ಮ್ಯುತಾಮದ್). ವಿಲಾಯತ್‍ಗಳನ್ನು 97 ಮ್ಯುತಾಮದಿಯಾತ್‍ಗಳಾಗಿಯೂ 750 ಷೇಖóತ್‍ಗಳಾಗಿಯೂ ವಿಂಗಡಿಸಲಾಗಿದೆ.

	ನ್ಯಾಯವ್ಯವಸ್ಥೆ : ಟ್ಯೂನೀಷಿಯದ ನ್ಯಾಯವ್ಯವಸ್ಥೆಯಲ್ಲಿ ಮೂರು ಹಂತಗಳಿವೆ : ಟ್ಯೂನಿಸಿನಲ್ಲಿರುವ ಸರ್ವೋಚ್ಚ ನ್ಯಾಯಲಯ ; ಟ್ಯೂನಿಸ್, ಸಫಾಕಿಸ್ ಮತ್ತು ಸೂಸದಲ್ಲಿರುವ ಅಪೀಲು ನ್ಯಾಯಾಲಗಳು ; ದೊಡ್ಡಪಟ್ಟಣಗಳಲ್ಲಿರುವ ಪ್ರಥಮ ವಿಚಾರಣಾ ನ್ಯಾಯಾಲಯಗಳು. ಅಲ್ಲದೆ ಕೆಲವು ಸ್ಥಳೀಯ ಮ್ಯಾಜಿಸ್ಟ್ರೇಟುಗಳಿಗೆ ವ್ಯಾಪಕ ಅಧಿಕಾರವಿದೆ. ಜಮೀನಿನ ನೋಂದಣಿ ಮತ್ತು ಒಡೆತನ ಕುರಿತ ವ್ಯವಹಾರಗಳನ್ನು ವಿಚಾರಿಸಲು ಜಮೀನು ನ್ಯಾಯಲಯಗಳಿವೆ. ಸ್ವಾತಂತ್ರ್ಯ ಬಂದಮೇಲೆ ಮತೀಯ ಸ್ವತ್ತುಗಳನ್ನು ರಾಷ್ಟ್ರೀಕರಿಸಲಾಯಿತು. ಬಹುಪತ್ನೀತ್ವವನ್ನು ರದ್ದುಮಾಡಲಾಗಿದೆ. ವಿವಾಹವಿಚ್ಛೇದವನ್ನು ನ್ಯಾಯಾಲಯದ ತೀರ್ಪಿಗೆ ಬದ್ದಗೊಳಿಸಲಾಗಿದೆ.

	ಶಿಕ್ಷಣ : 1956ರಲ್ಲಿ ಎಲ್ಲ ಶಿಕ್ಷಣವೂ ರಾಷ್ಟ್ರೀಯ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಟ್ಟಿತು. ಆಯವ್ಯದ ಐದನೆಯ ಒಂದು ಭಾಗ ಇದಕ್ಕೆ ಖರ್ಚಾಗುತ್ತದೆ. ದೇಶದಲ್ಲಿದ್ದ ಕುರಾನ್ ಶಾಲೆಗಳನ್ನು ರಾಷ್ಟ್ರೀಕರಿಸಿ, ಮತೀಯ ಹಾಗೂ ರಾಜ್ಯ ಶಾಲೆಗಳ ವ್ಯತ್ಯಾಸವನ್ನು ರದ್ದುಗೊಳಿಸಲಾಯಿತು. ಶಾಲಾ ವಯಸ್ಸಿನ ಮೂರನೆಯ ಒಂದು ಭಾಗ ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ. ಅರಬ್ಬೀ ಮತ್ತು ಫ್ರೆಂಚ್ ಭಾಷೆಗಳು ಶಿಕ್ಷಣ ಮಾಧ್ಯಮಗಳು. ದೇಶದಲ್ಲಿ ಅನೇಕ ಉಚ್ಚ ಶಿಕ್ಷಣ ಸಂಸ್ಥೆಗಳಿವೆ. ಅರಬ್ಬೀ ಸಾಹಿತ್ಯ ಹಾಗೂ ಇಸ್ಲಾಂ ಧರ್ಮದ ಅಧ್ಯಯನಕ್ಕೇ ಟ್ಯೂನಿಸ್ ನಗರದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯವಿದೆ. ಟ್ಯೂನೀಷಿಯ ವಿಶ್ವವಿದ್ಯಾಲಯ 1960ರಲ್ಲಿ ಸ್ಥಾಪಿತವಾಯಿತು.

	ವ್ಯವಸಾಯ : ದೇಶದ ಮುಕ್ಕಾಲು ಭಾಗ ಜನ ವ್ಯವಸಾಯಪ್ರದೇಶದಲ್ಲಿರುವವರು. ಮುಖ್ಯ ಬೆಳೆಗಳು ಮುಸುಕಿನ ಜೋಳ ಮತ್ತು ಗೋದಿ. ಇವು ಚಳಿಗಾಲದ ಬೆಳೆಗಳು. ಇವನ್ನು ಮುಖ್ಯವಾಗಿ ಟೆಲ್ ಪ್ರದೇಶದಲ್ಲಿ ಬೆಳೆಯುತ್ತಾರೆ. ಸ್ಟೆಪ್ ಹುಲ್ಲುಗಾಡಿನ ಬೆಳೆ ಬಾರ್ಲಿ. ಈಶಾನ್ಯದಲ್ಲಿ, ವಿಶೇಷವಾಗಿ ಮೆಡಿಟರೇನಿಯನ್ ತೀರದಲ್ಲೂ ಸಫಾಕಿನ್ ಸುತ್ತಮುತ್ತಲೂ ಆಲಿವ್ ಮರಗಳು ಬೆಳೆಯುತ್ತವೆ. ನಿಂಬೆ ಜಾತಿಯ ಹಣ್ಣುಗಳು, ಅಂಜೂರ, ಖರ್ಜೂರ, ಬಾದಾಮಿ ಹಾಗು ದಾಳಿಂಬೆ ವಿಶೇಷವಾಗಿವೆ. ದ್ರಾಕ್ಷಿ ಬಳ್ಳಿಗಳು ಟ್ಯೂನಿಸ್ ಮತ್ತು ಅಲ್ ವತನ್ ಅಲ್ ಕಿಬ್ಲಿ ವಿಲಾಯತ್‍ನಲ್ಲಿ ಬೆಳೆಯುತ್ತವೆ. ಹೊಗೆಸೊಪ್ಪು ಒಂದು ಬೆಳೆ.

	ಟೆಲ್ ಪ್ರದೇಶ ಮತ್ತು ಹುಲ್ಲುಗಾಡುಗಳಲ್ಲಿ ಕುರಿ ಸಾಕುತ್ತಾರೆ. ಬೆಟ್ಟಸೀಮೆಯಲ್ಲಿ ಆಡೂಗಳೂ ಹೆಚ್ಚು ನೀರಿನ ಸೌಕರ್ಯ ಇರುವ ಉತ್ತರ ಭಾಗದಲ್ಲಿ ದನಗಳೂ ಉಂಟು. ಕುದುರೆ ಹೇಸರಗತ್ತೆಗಳನ್ನು ಸಾಕುವುದು ಕಡಿಮೆಯಾಗುತ್ತಿದೆ. ಕತ್ತೆಗಳನ್ನೂ ಒಂಟೆಗಳನ್ನೂ ಸಾಕುತ್ತಾರೆ.

	ಅರಣ್ಯಗಾರಿಕೆ : ದೇಶದ ಸೇ.9ರಷ್ಟು ನೆಲ ಅರಣ್ಯಾವೃತ. ಕಾರ್ಕ್ ಇದ್ದಿಲು. ಸಾಗುವಾನಿ ಮುಖ್ಯ ಉತ್ಪನ್ನಗಳು. ಎತ್ತರದ ಸ್ಟೆಪ್ ಹುಲ್ಲುಗಾಡಿನ ಎಸ್ಪಾರ್ಟೊ ಹುಲ್ಲು ವಿಶೇಷವಾಗಿ ಬ್ರಿಟನಿಗೆ ರಫ್ತಾಗುತ್ತದೆ.

	ಮೀನುಗಾರಿಕೆ : ದೇಶದಲ್ಲಿ ಸುಮಾರು 7,000 ಬಡಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿವೆ. ಗಾಬಸ್ ಖಾರಿಯಲ್ಲಿ ಈ ಚಟುವಟಿಕೆ ವಿಶೇಷ ವರ್ಷಕ್ಕೆ ಸರಾಸರಿ 20,000-30,000 ಟನ್ ಮೀನು ಹಿಡಿಯಲಾಗುತ್ತದೆ. 120-300 ಟನ್ ಸ್ಪಂಜು ಸಿಗುತ್ತದೆ.

	ಗಣಿಗಾರಿಕೆ : ಕಪ್ಸಾ, ಟೆಲ್ ಮತ್ತು ಅಲ್ ಕಲಾ ಅಲ್ ಜಾರ್ದ ಪ್ರದೇಶಗಳಲ್ಲಿ ಫಾಸ್ಫೇಟ್ ದೊರಕುತ್ತದೆ. ಇದರಲ್ಲಿ ಬಹುಭಾಗ ರಫ್ತಾಗುತ್ತದೆ. ಉಳಿದದ್ದನ್ನು ಟ್ಯೂನಿಸ್‍ನಲ್ಲಿ ರಾಸಾಯನಿಕ ಗೊಬ್ಬರದ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಟ್ಯೂನೀಷಿಯದಲ್ಲಿ ಮುಖ್ಯವಾಗಿ ಆ ಕೆಫ್ ಬಳಿಯ ಜೈರಿಸ್ಸದಲ್ಲಿ ಮತ್ತು ಕಪ್ಸಾದಲ್ಲಿ ಕಬ್ಬಿಣ ಅದುರು ದೊರಕುತ್ತದೆ. ಟೆಲ್ ಪ್ರದೇಶದಲ್ಲಿ ಅಲ್ಲಲ್ಲಿ ಸೀಸ ಮತ್ತು ಸತು ಸಿಗುತ್ತವೆ.

	ವಿದ್ಯುಚ್ಛಕ್ತಿ : ಟ್ಯೂನೀಷಿಯದಲ್ಲಿ ಕಲ್ಲಿದ್ದಲಾಗಲಿ ಪೆಟ್ರೋಲಿಯಂ ಆಗಲಿ ದೊರಕುವುದಿಲ್ಲ. ನಿಸರ್ಗ ಅನಿಲವುಂಟು. ಉಷ್ಣ ವಿದ್ಯುತ್‍ಕೇಂದ್ರಗಳಿಂದಲೇ ವಿಶೇಷವಾಗಿ ಶಕ್ತಿಯನ್ನು ತಯಾರಿಸಲಾಗುತ್ತದೆ. ಇದಕ್ಕೆ ಬೇಕಾದ ಇಂಧನವನ್ನು ಆಮದು ಮಾಡಿಕೊಳ್ಳಬೇಕು. ವಾಡೀ ಮಲ್ಲಾಕ್ ಮತ್ತು ವಾಡೀ ಮಜರ್ಡಾ ನದಿಗಳಿಂದ ನಿಬ್ಬಾರ್ ಮತ್ತು ಟಾಲಾರ್‍ವಿಲ್‍ನಲ್ಲಿ ಜಲವಿದ್ಯುತ್ತನ್ನು ಉತ್ಪಾದಿಸುತ್ತಾರೆ. ವಿದುತ್ ವಿತರಣ ವ್ಯವಸ್ಥೆ ರಾಷ್ಟ್ರೀಕೃತವಾಗಿದೆ.

ಕೈಗಾರಿಕೆ : ಟ್ಯೂನೀಷಿಯದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬೆಳೆದಿಲ್ಲ. ಬಂಡವಾಳದ, ತಂತ್ರಜ್ಞರ ಮತ್ತು ಕುಶಲಕಾರ್ಮಿಕರ ಅಭಾವ ಮುಖ್ಯ ಕಾರಣ. ಹಿಟ್ಟಿನ ಗಿರಣಿ, ಆಲಿವ್ ಎಣ್ಣೆ, ಮೀನಿನ ಡಬ್ಬೀಕರಣ ಮುಂತಾದ ಕೆಲವು ಆಹಾರ ಕೈಗಾರಿಕೆಗಳೂ ಇವೆ. ಸೂಸ, ಕಸರ್ ಹಲ್ಲಾಲ್ ಮತ್ತು ಆಲ್ ಮುನಾಸ್ಟಿರ್‍ನಲ್ಲಿ ಜವಳಿ ಗಿರಣಿಗಳೂ ಬಿಜóರ್ಟೀಯಲ್ಲಿ ನೌಕಾನಿರ್ಮಾಣ ಕೈಗಾರಿಕೆಯೂ ಮನ್‍ಜಿóಲ್ ಬೂ ರುಕಾಬಾದಲ್ಲಿ ಲೋಹ ಕೈಗಾರಿಕೆಯೂ ಬಾಜಾದಲ್ಲಿ ಸಕ್ಕರೆ ಕೈಗಾರಿಕೆಯೂ ಆಲ ಕಸ್ರೇನ್‍ನಲ್ಲಿ-ಸೆಲುಲೋಸ್ ಕಾರ್ಖಾನೆಯೂ ಟ್ಯೂನಿಸ್, ಬಿಜûರ್ಟೀಗಳಲ್ಲಿ ಸಿಮೆಂಟ್ ಕಾರ್ಖಾನೆಗಳೂ ಇವೆ. ಅಲ್ಲದೆ ಧರ್ಮ ರಸಾಯನ, ಉಪ್ಪು, ಎಣ್ಣೆ, ಸಾಬೂನು ಕಾರ್ಖಾನೆಗಳು ಕೆಲವೆಡೆ ಇವೆ.

ವಿದೇಶಿ ವ್ಯಾಪಾರ : ಟ್ಯೂನೀಷಿಯದಿಂದ ರಫ್ತಾಗುವ ಪದಾರ್ಥಗಳಲ್ಲಿ ಮೂರನೆ ಎರಡು ಭಾಗ ಆಹಾರ ಮತ್ತು ಕಚ್ಚಾ ಖನಿಜಸಾಮಗ್ರಿ. ಆಮದಿನಲ್ಲಿ ಮುಕ್ಕಾಲು ಭಾಗ ಪೆಟೋಲಿಯಂ ಉತ್ಪನ್ನಗಳು ಮತ್ತು ಉತ್ಪಾದಿತ ಸರಕುಗಳು. ಸುಮಾರು ಅರ್ಧದಷ್ಟು ವ್ಯಾಪಾರ ಫ್ರಾನ್ಸಿನೊಂದಿಗೆ ನಡೆಯುತ್ತದೆ.
ಟ್ಯೂನೀಷಿಯನ್ ದಿನಾರ್ ಇಲ್ಲಿಯ ನಾಣ್ಯ. ಇದನ್ನು 1,000 ಮಿಲೈಮ್‍ಗಳಾಗಿ ವಿಂಗಡಿಸಲಾಗಿದೆ.

ಸಾರಿಗೆ :  ಟ್ಯೂನೀಷಿಯದ ರೈಲ್ವೆಯನ್ನು ರಾಷ್ಟ್ರೀಕರಿಸಲಾಗಿದೆ. ದೇಶದ ಉತ್ತರ ಭಾಗದಲ್ಲಿ 280 ಮೈ. ; ಟ್ಯೂನಿಸಿನಿಂದ ದಕ್ಷಿಣ ಮತ್ತು ಪಶ್ಚಿಮಕ್ಕೆ 689 ಮೈ.; ಸ್ಪ್ಯಾಕ್ಸ್‍ನಿಂದ ಫಾಸ್ಫೇಟ್ ಗಣಿಗಳಿಗೆ 274 ಮೈ.-ಇದು ಟ್ಯೂನೀಷಿಯದ ರೈಲ್ವೆ ವ್ಯವಸ್ಥೆ. ದೇಶದಲ್ಲಿ 12,000 ಮೈ. ರಸ್ತೆಗಳಿವೆ.

ಟ್ಯೂನೀಷಿಯದ ಮುಖ್ಯ ರೇವುಗಳು ಟ್ಯೂನಿಸ್, ಸ್ಪ್ಯಾಕ್ಸ್. ಬಿಜûರ್ಟೀ ಮತ್ತು ಸೂಸ. ಟ್ಯೂನಿಸ್ ನಗರದ ಬಳಿಯ ಅಲ್ ಉವೇನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
(ವಿ.ಜಿ.ಕೆ.)

ಇತಿಹಾಸ : ಕ್ರಿ,ಪೂ 12ನೆಯ ಶತಮಾನದಿಂದಲೇ ಉತ್ತರ ಆಫ್ರಿಕದ ತೀರದಲ್ಲಿ ಫಿನಿಷಿಯನರ ಅನೇಕ ವ್ಯಾಪಾರ ಕಾರ್ತೇಜು ಈ ಠಾಣ್ಯಗಳಿದ್ದುವು. ಕ್ರಿ.ಪೂ. 8ನೆಯ ಶತಮಾನದಲ್ಲಿ ಸ್ಥಾಪಿತವಾದ ಕಾರ್ತೇಜು ಈ ಠಾಣ್ಯಗಳ ಒಳಗೊಂಡ ಸಾಗರಿಕ ಸಾಮ್ರಜ್ಯವೊಂದನ್ನು ಕ್ರಿ.ಪೊ. 6ನೆಯ ಶತಮಾನದಲ್ಲಿ ಆರಂಭಿಸಿತು. ಈಗಿನ ಟ್ಯೂನೀಷಿಯದ ಪ್ರದೇಶ ಕಾರ್ತೇಜು ಚಕ್ರಾಧಿಪತ್ಯಕ್ಕೆ ಸೇರಿತು. ರೋಮಿಗೂ ಕಾರ್ತೇಜಿಗೂ ನಡೆದ ಪ್ಯೂನಿಕ್ ಯುದ್ಧಗಳಲ್ಲಿ ಅಂತಿಮವಾಗಿ ಕಾರ್ತೇಜು ಸೋತುಹೊಯಿತು. ( ಕ್ರಿ.ಪೂ. 146).

ರೋಮನ್ ಚಕ್ರಾಧಿಪತ್ಯದಲ್ಲಿ ಟ್ಯೂನೀಷಿಯ ಆರ್ಥಿಕವಾಗಿ ಅಭಿವೃದ್ಧಿ ಹೊಂದಿತು. ಆದರೆ ಈ ಚಕ್ರಾಧಿಪತ್ಯ ಕ್ಷೀಣಿಸತೊಡಗಿದಾಗ ನೆಮ್ಮದಿ ತೊಲಗಿತು. ಬರ್ಬರರು ದಾಳಿಮಾಡಲಾರಂಭಿಸಿದರು.

ಮುಸ್ಲಿಮರು ಟ್ಯೂನಿಸನ್ನು 647ರಲ್ಲಿ ಗೆದ್ದರು ಆದರೆ ಟ್ಯೂನೀಷಿಯ ಸಂಪೂರ್ಣವಾಗಿ ಅವರ ಆಡಳಿತ ಒಳಪಟ್ಟಿದ್ದು 703ರಲ್ಲಿ. ಮುಸ್ಲಿಮ್ ಆಡಳಿತದಲ್ಲಿ ಟ್ಯೂನೀಷಿಯಕ್ಕೆ ಮತ್ತು ಕಾನ್‍ಸ್ಟಂಟೈನಿನ ಭಾಗಕ್ಕೆ ಇಫ್ರೀಕಿಯ ಎಂಬ ಹೆಸರು ಬಂತು. ಇಸ್ಲಾಂ ಮತ ಪ್ರಚಾರವಾಯಿತು. ಆದರೆ ಕ್ರೈಸ್ತರೂ ಯೆಹೂದ್ಯರೂ ಅಲ್ಪಸಂಖ್ಯಾತರಾಗಿ ಮುಂದುವರಿದರು. ಫಾತಿಮೈಟ್ ವಂಶದ ಅರಬ್ ಅರಸರು 909ರಿಂದ 1171ರ ವರೆಗೆ ಇಡೀ ಉತ್ತರ ಆಫ್ರಿಕದ ಮೇಲೆ ಒಡೆತನ ಸ್ಥಾಪಿಸಿದರು ಆದರೆ 972ರಿಂದ ಟ್ಯೂನೀಷಿಯದ ಆಡಳಿತವನ್ನು ತಮ್ಮ ಆಶ್ರಿತರಾದ ಬರ್ಬರರ ವಶಕ್ಕೆ ಕೊಟ್ಟಿದ್ದರು. 11ನೆಯ ಶತಮಾನದ ಮಧ್ಯದಲ್ಲಿ ಟ್ಯೂನೀಷಿಯದ ಬರ್ಬರ್ ಆಡಳಿತಗಾರರಿಗೂ ಫಾತಿಮೈಟರಿಗೂ ಕಲಹ ಉದ್ಭವಿಸಿತು. ಫಾತಿಮೈಟರು ಉತ್ತರ ಆಫ್ರಿಕದ ಮೇಲೆ ಅಲೆಮಾರಿ ಬೆಡುವಿನ್ ಜನರ ದಾಳಿಗಳಿಗೆ ಅವಕಾಶ ಮಾಡಿಕೊಟ್ಟರು. ಈ ಪ್ರದೇಶದಲ್ಲಿ ಅಶಾಂತಿ ಹಬ್ಬಿತು. ನಡುವೆ. 1148-1160ರಲ್ಲಿ ನಾರ್ಮನರು ಆಡಳಿತ ನಡೆಸಿದರು. ಫಾತಿಮೈಟರ ಉತ್ತರಾಧಿಕಾರಿಗಳಾದ ಅಲ್‍ಮೊಹೇದರೂ ನಾರ್ಮನರನ್ನು ಹೊಡೆದೋಡಿಸಿ ತಮ್ಮ ಅಧಿಕಾರ ಸ್ಥಾಪಿಸಿದರು. ಬರ್ಬರ ಹ್ಯಾಫ್ಸೈಟ್ ವಂಶದವರು ಇವರನ್ನು ಸೋಲಿಸಿದರು. ಅನಂತರ ಪ್ರಬಲರಾದ ತುರ್ಕರು 1575ರಲ್ಲಿ ಹ್ಯಾಫ್ಸೈಟರ ಆಳ್ವಿಕೆಯನ್ನು ಕೊನೆಗೊಳಿಸದರು. 17ನೆಯ ಶತಮಾನದ ತುರ್ಕಿ ಅರಸನೊಬ್ಬನ ವಂಶದವರು ಟ್ಯೂನೀಷಿಯದ ಬೇಗಳಾಗಿ ಆಡಳಿತ ನಡೆಸಿದರು ಟ್ಯೂನೀಷಿಯ ಗಣರಾಜ್ಯವಾಗುವ ವರೆಗೂ ಅದನ್ನು ಆಳಿದವರು. ಈ ವಂಶದವರೇ.

ಬೇಗಳಿಗೂ ಆಲ್ಜೀರಿಯಕ್ಕೂ ಆಗಿಂದಾಗ್ಗೆ ಕದನಗಳಾಗುತ್ತಿದ್ದವು. ಟ್ಯೂನೀಷಿಯ ಒಂದು ಕಡಲುಗಳ್ಳ ರಾಷ್ಟ್ರವಾಯಿರತು. ಮೆಡಿಟರೇನಿಯನ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಕೊಳ್ಳೆಹೊಡೆಯುವುದೇ ಸರ್ಕಾರದ ವರಮಾನದ ಮೂಲವಾಯಿತು. 19ನೆಯ ಶತಮಾನದ ಆದಿಯಲ್ಲಿ ಕಡಲುಗಳ್ಳತನ ಕೊನೆಗೊಂಡಾಗ ಟ್ಯೂನೀಷಿಯದ ಆರ್ಥಿಕತೆಗೆ ಭಾರಿ ಪೆಟ್ಟು ಬಿತ್ತು. ಸರ್ಕಾರದ ದುರ್ಬಲವಾಗಿತ್ತು. ಟ್ಯೂನೀಷಿಯದಲ್ಲಿ ವ್ಯವಸಯಾಯೋಗ್ಯವಾದ ಜಮೀನಿನ ಸ್ವಲ್ಪ ಭಾಗ ಮಾತ್ರ ಸಾಗುವಳಿಯಾಗುತ್ತಿದ್ದುದರಿಂದ ಅದರ ಆರ್ಥಿಕ ಸ್ಥಿತಿ ತುಂಬ ಅಸಮರ್ಪಕವಾಯಿತು.

	ಆ ವೇಳೆಗೆ ಟ್ಯೂನೀಷಿಯದ ಮೇಲೆ ಐರೋಪ್ಯ ಸಾಮ್ರಾಜ್ಯವಾದಿ ರಾಷ್ಟ್ರಗಳು ದೃಷ್ಟಿ ಹರಿಸಿದವು ಇಟಲಿ, ಫ್ರಾನ್ಸ್, ಬ್ರಿಟನ್‍ಗಳ ಸ್ಪರ್ಧೆ ಬೆಳೆಯಿತು. 1869ರ ವೇಳೆಗೆ ಟ್ಯೂನೀಷಿಯದ ದಿವಾಳಿಯಾಗುವ ಸ್ಥಿತಿ ಬಂದಿತ್ತು. ಬ್ರಿಟನ್. ಫ್ರಾನ್ಸ್, ಇಟಲಿಗಳು ಅದರ ಮೇಲೆ ಆರ್ಥಿಕ ಹತೋಟಿ ಹೊಂದಿದುವು. ಬ್ರಿಟಿಷ್ ರೈಲ್ವೆ ಮಾರ್ಗವೊಂದನ್ನು ಇಟಲಿ ಕೊಂಡಾಗ ಫ್ರಾನ್ಸ್-ಇಟಲಿಗಳ ನಡುವಣ ಸ್ಪರ್ಧೆ ತೀವ್ರವಾಯಿತು. ಕೆಲವು ಪಂಗಡಗಳನ್ನು ಶಿಕ್ಷಿಸುವ ನೆವದಿಂದ ಫ್ರೆಂಚರು 1881ರಲ್ಲಿ ಸೈನಿಕ ಕಾರ್ಯಕ್ರಮ ನಡೆಸಿದರು. ಫ್ರಾನ್ಸಿನ ರಕ್ಷಣೆಗೆ ಅಲ್ಲಿಯೇ ಬೇ ಒಪ್ಪಬೇಕಾಯಿತು. 1883ರಲ್ಲಿ ಟ್ಯೂನೀಷಿಯ ಫ್ರೆಂಚ್ ಆರಕ್ಷಿತ ಪ್ರದೇಶವಾಯಿತು. ಆಡಳಿತ ಸುಧಾರಣೆಗಳಾದವು.

	ಆದರೆ ಫ್ರೆಂಚ್ ರಕ್ಷಣೆಯ ಅವಧಿಯ ಉದ್ದಕ್ಕೂ ಟ್ಯೂನೀಷಿಯದಲ್ಲಿ ಬಂಡಾಯಗಳಾಗುತ್ತಲೇ ಇದ್ದುವು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಟ್ಯೂನೀಷಿಯ ಒಂದು ಮುಖ್ಯ ಯುದ್ಧಕಾರ್ಯಚರಣೆಯ ಕ್ಷೇತ್ರವಾಗಿತ್ತು. ಉತ್ತರ ಆಫ್ರಿಕದಲ್ಲಿ ಮಿತ್ರರಾಷ್ಟ್ರಗಳು ವಿಜಯ ಸ್ಥಾಪಿಸಿದ ಅನಂತರಕಾಲದ ಟ್ಯೂನೀಷಿಯದ ರಾಜಕೀಯ ಗೊಂದಲಮಯವಾದ್ದು. ಅಕ್ಷರಾಷ್ಟ್ರಗಳೊಡನೆ ಬೇ ಪಿತೂರಿ ಹೂಡಿದನೆಂಬ  ವ್ಯರ್ಥಾರೋಪವನ್ನೊಡ್ಡಿ ಫ್ರೆಂಚರು ಬೇನನ್ನು ಪದಚ್ಯತಿಗೊಳಿಸಿ ಅವನ ಬಂಧುವೊಬ್ಬನನ್ನು ಗಾದಿಯ ಮೇಲೆ ಕೂರಿಸಿದರು. ಟ್ಯೂನೀಷಿಯದಲ್ಲಿ ಸ್ವಾತಂತ್ರ್ಯ ಚಳವಳಿ ಬಿರುಸಾಯಿತು 1955ರಲ್ಲಿ ಫ್ರಾನ್ಸು ಟ್ಯೂನಿಷೀಯಕ್ಕೆ ಸ್ವಯಮಧಿಕಾರ ನೀಡಿತು. ಮರುವರ್ಷ ಟ್ಯೂನೀಷಿಯ ಸ್ವತಂತ್ರವಾಯಿತು. ರಾಜತ್ವ ರದ್ದಾದ್ದು 1957ರಲ್ಲಿ ಹಬೀಬ್ ಬುರ್ಗೀಬ ಟ್ಯೂನೀಷಿಯದ ಪ್ರಥಮ ಅಧ್ಯಕ್ಷರಾದರು.

	ಬಿಜûರ್ಟೀಯಲ್ಲಿದ್ದ ನೌಕಾ ನೆಲೆಯಿಂದ ತನ್ನ ಸೇನೆಯನ್ನು ಫ್ರಾನ್ಸು ಹಿಂದಕ್ಕೆ ಕರಸಿಕೊಳ್ಳಬೇಕೆಂಬ ಬುರ್ಗೀಬರ ಕೇಳಿಕೆಯನ್ನು ಫ್ರಾನ್ಸ ಪುರಿಸ್ಕರಿಸದ್ದರಿಂದ ಅವರು ಅದರ ಮೇಲೆ ದಿಗ್ಭಂಧನ ವಿಧಿಸಿದರು. ಫ್ರೆಂಚ್ ಮತ್ತು ಟ್ಯೂನೀಷಿಯನ್ ಸೇನೆಗಳ ನಡುವೆ ಕದನ ಸಂಭವಿಸಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ಕದನ ನಿಲುಗಡೆಯಾಯಿತು. ಫ್ರೆಂಚ್ ಸೇನೆಯ ತೆರವಿಗಾಗಿ 1963ರಲ್ಲಿ ಒಪ್ಪಂದವಾಯಿತು. ಟ್ಯೂನೀಷಿಯದಲ್ಲಿದ್ದ ಎಲ್ಲ ವಿದೇಶಿ ಒಡೆತನ ಜಮೀನುಗಳನ್ನೂ ಸರ್ಕಾರ 1964 ರಲ್ಲಿ ವಶಪಡಿಸಿಕೊಂಡಿತು. ಪ್ರತೀಕಾರವಾಗಿ ಫ್ರಾನ್ಸು ಟ್ಯೂನೀಷಿಯಕ್ಕೆ ನೀಡುತ್ತಿದ್ದ  ಆರ್ಥಿಕ ಸಹಾಯವನ್ನು ನಿಲ್ಲಿಸಿತು. 1966ರಲ್ಲಿ ಆದ ಒಪ್ಪಂದದ ಫಲವಾಗಿ ಈ ಸಹಾಯ ಪುನಾರಂಭವಾಯಿತು.

	ಬುರ್ಗೀಬರೇ ಟ್ಯೂನೀಷಿಯದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ